ಪೆನಿಸಿಲಿಯಮ್ - 
 	ಆಸ್ಕೊಮೈಸಿಟೀಸ್ ಗುಂಪಿನ ಪ್ಲೆಕ್ಟೊಮೈಸಿಟೀಸ್ ಶ್ರೇಣಿಯ ಆಸ್ಟರ್‍ಜಿಲ್ಲೇಲೀಸ್ ಗಣದ ಆಸ್ಟರ್‍ಜಿಲ್ಲೇಸೀ ಅಥವಾ ಯೂರೋಶಿಯೇಸೀ ಕುಟುಂಬಕ್ಕೆ ಸೇರಿದ ಪೂತಿಜನ್ಯಶಿಲೀಂಧ್ರ. ಆಡುಭಾಷೆಯಲ್ಲಿ ಇದಕ್ಕೆ ಹಸುರು ಬೂಷ್ಟು, ನೀಲಿಬೂಷ್ಟು, (ಗ್ರೀನ್ ಮೋಲ್ಡ್, ಬ್ಲೂ ಮೋಲ್ಡ್) ಇತ್ಯಾದಿ ಹೆಸರುಗಳುಂಟು. ಇದು ಸಾಮಾನ್ಯವಾಗಿ ಕೊಳೆಯುತ್ತಿರುವ ಕಿತ್ತಳೆ, ಮೋಸಂಬಿ, ನಿಂಬೆ, ಮುಂತಾದ ಈಳೆಜಾತಿಯ ಫಲಗಳ ಮೇಲೂ ಉಪ್ಪಿನಕಾಯಿ, ಹಣ್ಣಿನ ರಸಾಯನ, ಜೆಲಿ, ಜಾಮ್, ಚರ್ಮದ ವಸ್ತುಗಳು ಇತ್ಯಾದಿ ಸಾವಯವ ಪದಾರ್ಥಗಳ ಮೇಲೂ ಬೆಳೆಯುತ್ತದೆ. ಇದರ ಬೀಜಕಗಳು (ಸ್ಪೋರ್ಸ್) ತುಂಬ ಹಗುರವಾಗಿದ್ದು ಗಾಳಿ, ನೆಲ ಮುಂತಾದೆಡೆಗಳಲ್ಲೆಲ್ಲ ಹರಡುವುವು. ಇದರಲ್ಲಿ ಸುಮಾರು 136 ಕ್ಕೂ ಹೆಚ್ಚು ಪ್ರಬೇಧಗಳುಂಟು. ಇವುಗಳ ಪೈಕಿ ಅನೇಕವು ಮಾನವನ ದೃಷ್ಟಿಯಿಂದ ಹಾನಿಕರವಾಗಿವೆಯಾದರೂ (ಉದಾಹರಣೆಗೆ ನಿಂಬೆ ಜಾತಿಯ ಫಲಗಳಿಗೆ ಹಾನಿಯುಂಟುಮಾಡುವ ಪೇ. ಇಟ್ಯಾಲಿಕಮ್ ಹಾಗೂ ಪೆ. ಡಿಜಿಟೇಟಮ್ ಪ್ರಬೇಧಗಳು, ಸೇಬುಹಣ್ಣುಗಳಿಗೆ ಮಾರಕವಾದ ಪೆ. ಎಕ್ಸ್‍ಪ್ಯಾನ್ಸಮ್ ಪ್ರಬೇಧ) ಕೆಲವು ಪ್ರಬೇಧಗಳು ಆರ್ಥಿಕವಾಗಿ ತುಂಬ ಮಹತ್ತ್ವದವೆನಿಸಿವೆ. ಉದಾಹರಣೆಗೆ ರಾಕ್‍ಪೋರ್ಟ್ ಗಿಣ್ಣುವಿಗೆ (ಚೀಸ್) ಸ್ವಾದಕೊಡಲು ಪೆ. ರಾಕ್‍ಪೋರ್ಟ್‍ಯೈಯನ್ನೂ ಕ್ಯಾಮೆಂಬರ್ಟ್ ಗಿಣ್ಣುವಿಗೆ ಪರಿಮಳವೂಡಲು ಪೆ. ಕ್ಯಾಮೆಂಬರ್ಟಿಯೈಯನ್ನು ಬಳಸಲಾಗುತ್ತದೆ. ಅಂತೆಯೇ ಸಿಟ್ರಿಕ್, ಫ್ಯೂಮರಿಕ್, ಆಕ್ಸಾಲಿಕ್, ಗ್ಲೂಕಾನಿಕ್, ಗ್ಯಾಲಿಕ್ ಆಮ್ಲಗಳ ತಯಾರಿಕೆಗೆ ಪೆನಿಸಿಲಿಯಮ್ಮಿನ ಕೆಲವು ಪ್ರಬೇಧಗಳು ಅತ್ಯವಶ್ಯ. ಪೆನಿಸಿಲಿಯಮ್ಮಿನ ಈ ಪ್ರಬೇಧಗಳ ಪ್ರಾಮುಖ್ಯ ಬಲು ಹಿಂದಿನಿಂದಲೇ ಪರಿಚಿತವಾಗಿತ್ತು ನಿಜ. ಆದರೆ ಸಸ್ಯವಿಜ್ಞಾನದ ಪರಿಚಯವಿಲ್ಲದಿದ್ದವರ ಗಮನಕ್ಕೂ ಇದು ಬರುವಂತಾಗಿದ್ದೂ ಒಮ್ಮೆಲೆ ಇದರ ಮಹತ್ತ್ವ ಉತ್ತುಂಗ ಶಿಖರಕ್ಕೇರಿದ್ದೂ 1929ರಲ್ಲಿ ಬ್ರಿಟನ್ನಿನ ಪ್ರಸಿದ್ಧ ಏಕಾಣುಜೀವಿ ವಿಜ್ಞಾನಿ ಸರ್ ಅಲೆಗ್ಸಾಂಡರ್ ಫ್ಲೆಮಿಂಗ್ (1881-1955) ಪೆನಿಸಿಲಿಯಮಿನ ನೊಟೇಟಮ್ ಪ್ರಬೇಧದಿಂದ ಜೀವಿರೋಧಕ ಪೆನಿಸಿಲಿನ್ನನ್ನು ಪಡೆಯಬಹುದೆಂಬುದನ್ನು ತೋರಿಸಿದಾಗ (ನೋಡಿ- ಪೆನಿಸಿಲಿನ್).

ಪೆನಿಸಿಲಿಯಮ್ ಸಸ್ಯದ ದೇಹಕ್ಕೆ ಮೈಸೀಲಿಯಮ್ ಎಂದು ಹೆಸರು. ಇದು ವರ್ಣರಹಿತವಾದ ಅಥವಾ ತಿಳಿಹಸುರು ಇಲ್ಲವೆ ತಿಳಿನೀಲಿ ಬಣ್ಣದ ಹತ್ತಿಯ ಎಳೆಗಳಂಥ ಸೂಕ್ಷ್ಮ ಎಳೆಗಳಿಂದ ಕೂಡಿದೆ. ಇವಕ್ಕೆ ಹೈಫೆ ಎಂದು ಹೆಸರು. ಹೈಫೆಗಳು ವಿಪುಲವಾಗಿ ಕವಲೊಡೆದಿದ್ದು ಆಶ್ರಯದಾತ ವಸ್ತುವಿನ ಮೇಲೆ ಅಂಟಿಕೊಂಡು ಬೆಳೆಯುವುವು. ಅಲ್ಲಲ್ಲಿ ಹೈಫೆಗಳಿಂದ ರೈಜಾಯಿಡ್ ಎಂಬ ಸೂಕ್ಷ್ಮ ಹೀರುಕವಲುಗಳು ಹೊರಟು ಆಶ್ರಯದಾತ ವಸ್ತುವಿನಿಂದ ಆಹಾರಾಂಶವನ್ನು ಹೀರುತ್ತವೆ. ಹೈಫೆಗಳ ಒಳಗೆ ಕಣರೂಪದ ಕೋಶದ್ರವವೂ ಅನೇಕ ನ್ಯೂಕ್ಲಿಯಸುಗಳೂ ಉಂಟು.

ಪೆನಿಸಿಲಿಯಮ್ಮಿನಲ್ಲಿ ನಿರ್ಲಿಂಗರೀತಿಯ ಹಾಗೂ ಲಿಂಗರೀತಿಯ ಪ್ರಜನನಕ್ರಿಯೆಯನ್ನು ಕಾಣಬಹುದು. ನಿರ್ಲಿಂಗರೀತಿಯ ಪ್ರಜನನಕ್ರಿಯೆ ಕೊನಿಡಿಯ ಎಂಬ ಸೂಕ್ಷ್ಮಗಾತ್ರದ ಬೀಜಾಣುಗಳ ಮೂಲಕ ನಡೆಯುತ್ತದೆ. ಕೊನಿಡಿಯಗಳು ಉತ್ಪನ್ನವಾಗುವುದು ಕೊನಿಡಿಯೊಫೋರುಗಳೆಂಬ ವಿಶೇಷ ರಚನೆಗಳಲ್ಲಿ. ಹೈಫೆಗಳಿಂದ ಮೇಲಕ್ಕೆ ಲಂಬವಾಗಿ ಬೆಳೆಯುವ ಈ ಕೊನಿಡಿಯೊಫೋರುಗಳು ಗುಚ್ಛಗಳಲ್ಲಿ ಜೋಡಣೆಗೊಂಡಿರುವುವು. ಒಟ್ಟಾಗಿ ಇವು ಪೊರಕೆಯಂತೆ ಕಾಣುತ್ತವೆ. ಲ್ಯಾಟಿನ್ ಭಾಷೆಯಲ್ಲಿ ಪೊರಕೆಗೆ ಪೆನಿಸಿಲಸ್ ಎಂದು ಹೆಸರು. ಈ ಶಿಲೀಂಧ್ರದ ಕೊನಿಡಿಯೊಫೋರುಗಳು ಪೊರಕೆಯಂತೆ ಕಾಣುವುದರಿಂದ ಇದಕ್ಕೆ ಪೆನಿಸಿಲಿಯಮ್ ಎಂಬ ಹೆಸರು ಬಂದಿದೆ. ಪ್ರತಿ ಕೊನಿಡಿಯೊಫೋರಿನಿಂದ ಅನೇಕ ಕೊನಿಡಿಯ ಬೀಜಕಗಳು ಉತ್ಪತ್ತಿಯಾಗಿ ಕಾಲಕಾಲಕ್ಕೆ ಬೇರ್ಪಟ್ಟು ಗಾಳಿಯ ನೆರವಿನಿಂದ ಪ್ರಸಾರವಾಗುವುವು. ಯುಕ್ತ ಆತಿಥೇಯ ವಸ್ತುವಿನೊಡನೆ ಸಂಪರ್ಕ ಪಡೆದಾಗ ಮೊಳೆತು ಹೊಸ ಪೆನಿಸಿಲಿಯಮ್ ಬೂಷ್ಟನ್ನು ಉಂಟುಮಾಡುವುವು.

ಲಿಂಗರೀತಿಯ ಪ್ರಜನನಕ್ರಿಯೆ ನಡೆಯುವುದು ಆಂತೆರಿಡಿಯಮ್ (ಗಂಡು ಅಂಗ) ಮತ್ತು ಅಸ್ಕೊಗೋನಿಯಮ್ (ಹೆಣ್ಣು ಅಂಗ) ಎಂಬ ವಿಶೇಷ ಪ್ರಜನನಾಂಗಗಳ ಪರಸ್ಪರ ಸಂಪರ್ಕದಿಂದ. ಬೇರೆ ಬೇರೆ ಸಸ್ಯದೇಹಗಳ ಮೇಲೆ ಬೆಳೆಯುವ ಇವು ಸಂಪರ್ಕ ಪಡೆದಾಗ ಇವುಗಳಲ್ಲಿಯ ನ್ಯೂಕ್ಲಿಯಸುಗಳು ಸಂಯೋಗಗೊಂಡು, ಕಾಲಾನಂತರದಲ್ಲಿ ಇವುಗಳಿಂದ ಆಸ್ಕೊಸ್ಪೋರುಗಳೆಂಬ ಬೀಜಕಗಳು ಹುಟ್ಟುವುವು. ಆಸ್ಕೊಸ್ಫೋರುಗಳು ಕೊನಿಡಿಯಗಳಂತೆಯೇ ಗಾಳಿಯ ಮೂಲಕ ಪಸರಿಸಿ ಯುಕ್ತ ವಾತಾವರಣದಲ್ಲಿ ಮೊಳೆತು ಹೊಸ ಪೆನಿಸಿಲಿಯಮ್ ಆಗಿ ಬೆಳೆಯುವುವು.
(ಎಸ್.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ